Friday 14 August 2015

From: insightsonindia.com 

KANNADA LITERATURE OPTIONAL: Strategy by D K BALAJI, RANK – 36, CSE – 2014

Strategy for Kannada Literature Optional Paper of UPSC Civil Services Mains Exam
ಪ್ರಿಯ ಸ್ನೇಹಿತರೆ,
ಕನ್ನಡ ಸಾಹಿತ್ಯ ಐಚ್ಚಿಕ ವಿಷಯ ಕುರಿತ ಲೇಖನಕ್ಕೆ ತಾವೆಲ್ಲರೂ ಕಾತರದಿಂದ ಕಾಯುತ್ತಿದ್ದೀರಿ. ತಡ ಮಾಡಿದ್ದಕ್ಕೆ ವಿಷಾದಿಸುತ್ತೇನೆ.
ಮೊದಲಿಗೆ ಕನ್ನಡ ಸಾಹಿತ್ಯವನ್ನು ಆಯ್ಕೆಮಾಡಿಕೊಂಡಿದ್ದಕ್ಕೆ ಅಭಿನಂದನೆಗಳು. ನಿಮ್ಮ ನಿರ್ಧಾರ ಸರಿಯಾಗಿದೆ. ಕನ್ನಡ ಸಾಹಿತ್ಯದಲ್ಲಿ ನಿಬ್ಬೆರಗಾಗಿಸುವ ಅಂಕಗಳನ್ನು ತೆಗೆದುಕೊಳ್ಳಲು ವಿಪುಲ ಅವಕಾಶಗಳಿವೆ.
ನನಗೆ ಕನ್ನಡದ ಮೇಲೆ ಅಪಾರ ಒಲವು ಮೂಡಿಸಿ, ಕನ್ನಡ ಭಾಷೆಯ ಮೇಲೆ ಹಿಡಿತ ಸಾಧಿಸಲು ಕಾರಣೀ ಭೂತರಾದ ನನ್ನ ಪ್ರೌಡಶಾಲೆ ಕನ್ನಡ ಗುರುಗಳಾದ ಶ್ರೀ ಡಿ.ಎಸ್. ತಿಮ್ಮಯ್ಯ ನವರಿಗೆ ನನ್ನ ಕನ್ನಡ ಸಾಹಿತ್ಯದ ಯಶಸನ್ನು ಸಮರ್ಪಿಸುತ್ತೇನೆ. ಕನ್ನಡದಲ್ಲಿ ನನಗೆ ಬಂದಿರುವ ೩೧೧/೫೦೦ ಅಂಕಗಳನ್ನು ಆ ಮಹಾನುಭಾವ ಅಂದು ಕನ್ನಡ ಪಾಠ ಕಲಿಸುವುದರ ಮೂಲಕ ನನಗೆ ನೀಡಿದ ವರ ಎಂಬುದೇ ನನ್ನ ಭಾವನೆ. (ಪ್ರೌಡಶಾಲೆ ಯಲ್ಲಿ ಕಲಿತ ಸಂಧಿ, ಸಮಾಸ, ಛಂದಸ್ಸು, ಅಲಂಕಾರ, ಇತ್ಯಾದಿಗಳನ್ನು ನಾನು ಪರೋಕ್ಷವಾಗಿ ಉತ್ತರದಲ್ಲಿ ಸೇರಿಸಿ ಉತ್ತರವನ್ನು ವಿಮರ್ಶಾತ್ಮಕಕವಾಗಿಸಿದ್ದೆ.)
ಮೊದಲಿಗೆ ನನ್ನ ಕನ್ನಡ ಸಾಹಿತ್ಯ ಗುರುಗಳಾದ ಶ್ರೀ ವೆಂಕಟೇಶಪ್ಪ (ಜೈಸ್ ಸಂಸ್ಥೆ ವಿಜಯನಗರ ಬೆಂಗಳೂರು) ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ವೆಂಕಟೇಶಪ್ಪ ಸರ್ ಅವರು ಸುಧೀರ್ಘವಾಗಿ ಹಲವು ವಿಷಯಗಳನ್ನು ಚರ್ಚಿಸಿದ್ದು ಮತ್ತು ಅವರು ನೀಡಿದ ಮಾದರಿ ಉತ್ತರಗಳು ಅನುಕೂಲವಾದವು.
ಅಂತೆಯೆ ಶ್ರೀ ಜಿನೆಂದ್ರ ಖನಗವಿ (ಅಪರ ಪೋಲಿಸ್ ವರಿಷ್ಠಾಧಿಕಾರಿ, ವಿಜಯಪುರ) ಅವರಿಗೆ ವಿಶೇಷವಾಗಿ ಆಭಾರಿಯಾಗಿದ್ದಿನಿ. ತಮ್ಮ ಬಿಡುವಿರದ ಕೆಲಸದ ನಡುವೆಯೂ ನನಗೆ ದೂರವಾಣಿ ಮತ್ತು whaatsapp ಗಳಲ್ಲಿ ಅಧ್ಬುತ ಮಾರ್ಗದರ್ಶನ ನೀಡಿದರು. ನನ್ನ ಅಂಕಗಳು ಶೇ. ೨೫ ರಷ್ಟು ಹೆಚ್ಚಾಗಲು ಅವರ ಮಾರ್ಗದರ್ಶನ ಭಾರಿ ಸಹಾಯಕವಾಯಿತು. ನಾನು ಅಂಚೆ ಮೂಲಕ ಕಳುಹಿಸಿದ ಉತ್ತರಗಳನ್ನು ಪರಿಶೀಲಿಸಿ ಉತ್ತರ ಗುಣಮಟ್ಟ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಹೊಸದಾಗಿ ಕನ್ನಡ ಸಾಹಿತ್ಯ ಸಿದ್ಧತೆ ಆರಂಭಿಸುವ ಅಭ್ಯರ್ಥಿಗಳಿಗೆ ಕಿವಿಮಾತು – ಕೋಚಿಂಗ್ ಇಲ್ಲದೆ ಕನ್ನಡ ಸಾಹಿತ್ಯ ಅಧ್ಯಯನ ಕಷ್ಟಸಾಧ್ಯ ಎಂಬುದು ನನ್ನ ಸ್ವಂತ ಅಭಿಪ್ರಾಯ. ಇದಕ್ಕೆ ಕಾರಣ ಕನ್ನಡ ಸಾಹಿತ್ಯಕ್ಕೆ ಸಂಬಂದಿಸುವ ಎಲ್ಲ ಪುಸ್ತಕಗಳು ಒಂದೆಡೆ ಸಿಗುವುದಿಲ್ಲ. ಹಲವು ಪುಸ್ತಕಗಳ ಮುದ್ರಣ ನಿಂತೇ ಹೋಗಿದೆ. ಆದರೆ ಕನ್ನಡ ಸಾಹಿತ್ಯ ಬೋಧಿಸುವವರ ಎಲ್ಲ ಅಗತ್ಯ ಪುಸ್ತಕಗಳನ್ನು ಕಲೆ ಹಾಕಿರುತ್ತಾರೆ. ನಂತರ ಕೋಚಿಂಗ್ ಹೋದಾಗ ನಿಮಗೆ ಮಾದರಿ ಉತ್ತರಗಳು, ಯಶಸ್ವಿ ವಿಧ್ಯಾರ್ಥಿಗಳ ಉತ್ತರಗಳು ಲಭ್ಯವಾಗುತ್ತವೆ. ಅದು ಬಹಳ ಸಹಾಯಕವಾಗುತ್ತದೆ. (ಆ ಉತ್ತರಗಳನ್ನು ಉರು ಹಚ್ಚಬಾರದು. ಆ ಉತ್ತರಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಸ್ವಂತಿಕೆ ಬಳಿಸಿ ‘ನಿಮ್ಮ’ ಉತ್ತರ ತಯಾರಿಸುವ ಚಾಕಚಕ್ಯತೆ ಬೆಳೆಸಿಕೊಂಡರೆ ನಿಬ್ಬೆರಗಗಿಸುವ ಅಂಕಗಳು ನಿಮ್ಮ ಕಿಸೆಗೆ ತಾವಾಗಿಯೇ ಬಂದು ಬೀಳುತ್ತವೆ).

ಕನ್ನಡ ಸಾಹಿತ್ಯ ಅಭ್ಯರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು (ನನ್ನ ಪ್ರಕಾರ) ಕೆಳಕಂಡಂತಿವೆ;
  • ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪರಿಶ್ರಮ ಬೇಡ. ಅದನ್ನು ಕೇವಲ ಎರಡು ತಿಂಗಳಲ್ಲಿ ಓದಿಮುಗಿಸಬಹುದು ಎನ್ನುವ ತಪ್ಪು ಕಲ್ಪನೆ. (ಇತರೆ ಐಚ್ಚಿಕ ವಿಷಯದ ವಿಧ್ಯಾರ್ಥಿಗಳು ೭-೮ ತಿಂಗಳುಗಳು ಓದಲೇಬೇಕಿರುವಾಗ ಮತ್ತು ಅಷ್ಟು ಓದಿದರೂ ಸಹ ಅವರ ಪರಿಶ್ರಮಕ್ಕೆ ಪ್ರತಿಫಲ ಸಿಗುವುದು ಅನಿಶ್ಚಿತವಾಗಿರುವಾಗ ಕನ್ನಡ ಕಂದಮ್ಮಗಳಾದ ನೀವು ‘ನಾನು ಕನ್ನಡ ವಿಷಯವನ್ನು ಕೇವಲ ೨ ತಿಂಗಳಲ್ಲಿ ಮುಗಿಸುತ್ತೇನೆ, ಅದಕ್ಕಿಂತ ಹೆಚ್ಚಿಗೆ ಓದಲು ಸಾಧ್ಯವಿಲ್ಲ’ ಎಂದುಕೊಳ್ಳೋದು ಹಾಸ್ಯಾಸ್ಪದ. ದಯವಿಟ್ಟು ಕನಿಷ್ಠ ೪ ತಿಂಗಳು ಕನ್ನಡಕ್ಕಾಗಿ ಮೀಸಲಿಡಿ ಹಾಗು ಇದರಲ್ಲಿ ಮೈನವಿರೇಳಿಸುವ ಅಂಕಗಳನ್ನು ಪಡೆದು ಒಳ್ಳೆಯ ರಾಂಕ್ಕ್ ಪಡೆಯಿರಿ.)
  • ಕನ್ನಡ ಸಾಹಿತ್ಯ ಪಠ್ಯ ವಿಷಯ (ಸಿಲಬುಸ)ನ್ನು ಸಂಪೂರ್ಣ ಓದದೆ ಕೇವಲ ಮುಖ್ಯ ಪಾಠಗಳನ್ನು ಮಾತ್ರ ಓದುವುದು. ಸಿಲಬುಸ್ ಪೂರ್ಣ ಓದಲು ಸಾಧ್ಯವಾಗದಿದ್ದರೆ ಕನಿಷ್ಟಪಕ್ಷ ಶೇ. ೯೦ ಸಿಲಬುಸ್ ಆದರು ಓದಿ. ಇಲ್ಲದಿದ್ದರೆ ನಿಮಗೆ ಎಲ್ಲರೂ ಪಡೆಯುವಂತೆ ಸರಾಸರಿ ಅಂಕಗಳು ಮಾತ್ರ ಲಭಿಸುತ್ತವೆ.
  • ಮೂಲ ಪುಸ್ತಕಗಳನ್ನು ಓದದೆ ನೋಟ್ಸ್ ಗಳನ್ನ ಓದುವುದು (ಉದಾಹರಣೆಗೆ, ‘ಬೆಟ್ಟದ ಜೀವ’ ಕಾದಂಬರಿಯನ್ನೇ ಓದದೆ ಅದರ ವಿಮರ್ಶೆಯನ್ನು ಅಥವಾ ನೋಟ್ಸ್ ನ್ನು ಓದಿ ಉತ್ತರಿಸುವುದು). ಅಥವಾ ಹಿಂದಿನ ಯಶಸ್ವೀ ವಿಧ್ಯಾರ್ಥಿಗಳ ಉತ್ತರಗಳನ್ನು ಓದುವುದು ಅಥವ ಪಾಠದ ಧ್ವನಿ ಮುದ್ರಿಕೆ (ಆಡಿಯೋ) ಗಳನ್ನು ಕೇಳಿ ಸುಮ್ಮನಾಗುವುದು. ಈ ತಪ್ಪನ್ನು ತುಂಬಾ ವಿಧ್ಯಾರ್ಥಿಗಳು ಮಾಡಿದ್ದಾರೆ. ದಯವಿಟ್ಟು ಮೊದಲು ಮೂಲ ಪುಸ್ತಕ ನಂತರ ವಿಮರ್ಶೆ, ನೋಟ್ಸ್, ಯಶಸ್ವೀ ವಿಧ್ಯಾರ್ಥಿಗಳ ಉತ್ತರ ಇತ್ಯಾದಿ.
  • ಪ್ರಶ್ನೆ-ಉತ್ತರದ ರೂಪದಲ್ಲಿ ತಯಾರಿ ನಡೆಸುವುದು ಹೆಚ್ಚಿನ ಅಂಕಗಳಿಗೆ ದಾರಿಮಾಡಿ ಕೊಡುವುದಿಲ್ಲ. ಈಗಿನ ಪ್ರಶ್ನೆ-ಪತ್ರಿಕೆಯ ಸ್ವರೂಪವನ್ನು ಗಮನಿಸಿದರೆ ವಿಷಯದ ಮೇಲೆ ಹಿಡಿತ ಅವಶ್ಯಕ ಎಂದು ವೇದ್ಯವಾಗುತ್ತದೆ. ಹಾಗಿರುವಾಗ ಪ್ರತಿ ಪಾಠದ ಮೇಲೆ ೩-೪ ಪ್ರಶ್ನೆಗಳಿಗೆ ಚೆಂದದ ಉತ್ತರ ಸಿದ್ಧ ಮಾಡಿ ಉಳಿದ ಪ್ರಶ್ನೆಗಳಿಗೆ ಆ ಉತ್ತರದಿಂದಲೇ ಉತ್ತರ ಅರಸುವ ಮತ್ತು ಆರಿಸುವ ವಿಧಾನ ತಮಗೆ ನಿಬ್ಬೆರಗಾಗಿಸುವ ಅಂಕಗಳನ್ನು ದಯಪಾಲಿಸುವುದಿಲ್ಲ. ಉತ್ತರವನ್ನು ಮನೆಗೆ ಉಪಮಾನವಾಗಿ ಪರಿಗಣಿಸಿ ಹೇಳುವುದಾದರೆ ಉತ್ತರ ಪತ್ರಿಕೆಯ ಮೇಲೆ ಮನೆ ಕಟ್ಟಲು ಅವಶ್ಯಕವಾದ ಇಟ್ಟಿಗೆಗಳನ್ನು ತಯಾರಿಸಿಕೊಂಡು ಹೋಗಿ ಅವರು ಕೇಳಿದಂತೆ ಮನೆ ಕಟ್ಟಬೇಕೇ ವಿನಃ ಮನೆಯನ್ನು ಮೊದಲೇ ಕಟ್ಟಿ ಅಲ್ಲಿ ಪ್ರತಿಷ್ಟಾಪಿಸುವುದು; ಅಥವಾ ಆ ಮನೆಯನ್ನು ಪರೀಕ್ಷಾ ಕೋಣೆಯಲ್ಲಿ ಕೆಡವಿ ಇಟ್ಟಿಗೆಗಳನ್ನು ಆಯ್ದು ಕಟ್ಟುವುದು ತಕ್ಕುದಲ್ಲ.
  • ಕನ್ನಡವನ್ನು ವೇಗವಾಗಿ ಬರೆಯಲು ಪ್ರಯತ್ನಿಸದಿರುವುದು.
  • ಉತ್ತರದಲ್ಲಿ ಕೇವಲ ಕಥೆಯನ್ನೇ ತುಂಬಿ ವಿಮರ್ಶೆಯನ್ನು ಕಡೆಗಣಿಸುವುದು. ವಿಮರ್ಶಾತ್ಮಕ ಉತ್ತರಗಳಿಗೆ ಮಾತ್ರ ಗರಿಷ್ಟ ಅಂಕ ಲಭಿಸುತ್ತದೆ. (ವಿಮರ್ಶಾತ್ಮಕವಾಗಿ ಹೇಗೆ ಉತ್ತರಿಸಬೇಕು ಎಂಬುದನ್ನು ಮುಂದೆ ನೋಡೋಣ).
ಪತ್ರಿಕೆ ೧
೧. ಭಾಷಾಶಾಸ್ತ್ರ
ಈ ಪಾಠದಿಂದ ನೇರ ಪ್ರಶ್ನೆಗಳು ಬರುವುದರಿಂದ ಪುಸ್ತಕ ವನ್ನು ಚೆನ್ನಾಗಿ ಓದಿ ಮನನ ಮಾಡಿ. ಪ್ರತಿ ಉತ್ತರದಲ್ಲೂ ಹೇರಳವಾಗಿ ಉದಾಹರಣೆಗಳನ್ನೂ ನೀಡಬೇಕು. ಪ್ರತಿ ವಿಷಯದ ಮೇಲೂ ಒಂದು ಅಥವಾ ಎರಡು ಉದಹರಣೆ ಮಾತ್ರ ಖಚಿತವಾಗಿ ನೆನಪಿರಲಿ. ಅದಕ್ಕಿಂತ ಹೆಚ್ಚು ನೆನಪಿದ್ದರು ಪರೀಕ್ಷೆಯಲ್ಲಿ ಸೇರಿಸಲು ಸಾಧ್ಯವಿಲ್ಲ. (ನಿದರ್ಶನ – ಧ್ವನಿ ವ್ಯತ್ಯಾಸದಲ್ಲಿ ಮಿತವ್ಯಯಾಸಕ್ತಿ ಗೆ ಎರಡು, ಅವಧಾರಣೆ ಗೆ ಎರಡು ಹೀಗೆ ಪ್ರತಿಯೊಂದಕ್ಕೂ ಉದಹರಣೆ ತಿಳಿದಿರಬೇಕು)
ಭಾಷಾಶಾಸ್ತ್ರಕ್ಕೆ ‘ಕನ್ನಡ ಭಾಷ ಚರಿತ್ರೆ’ (ಲೇ: ಎಂ.ಎಚ್. ಕೃಷ್ಣಯ್ಯ) ಮತ್ತು ಸಾ.ಶಿ. ಮರುಳಯ್ಯ ವಿರಚಿತ ಭಾಷಾಶಾಸ್ತ್ರ ಪುಸ್ತಕಗಳು ಸಹಕಾರಿ. ಅಂತೆಯೇ, ವೆಂಕಟೇಶಪ್ಪ ಸರ್ ಅವರ ತರಗತಿ ಟಿಪ್ಪಣಿಗಳು ಬಹಳ ಸಹಾಯಕವಾದವು.
ಭಾಶಶಸ್ತ್ರದ ಪರಿಕಲ್ಪನೆಗಳನ್ನು ಪತ್ರಿಕೆ ೨ ರಲ್ಲಿ ಭಾವಾರ್ಥ ಬರೆಯುವಾಗ ಕೂಡ ಬಳಸಿಕೊಳ್ಳಬಹುದು. ಉದಾಹರಣೆಗೆ, ನೀಡಿರುವ ಪದ್ಯಭಾಗದಲ್ಲಿನ ಹಳಗನ್ನಡ ಪದಗಳನ್ನು ಗಮಿನಿಸಿ, ಆ ಪದಗಳಿಗೆ ಹೊಸಗನ್ನಡ ಸಮಾನಂತರ ಪದಗಳನ್ನು ಬರೆದು, “ಈ ಪಧ್ಯಭಾಗದಿಂದ ಕನ್ನಡ ಭಾಷೆಯ ಅವಸ್ಥಾ೦ತರದ ವಿವಿಧ ಹಂತಗಳನ್ನು ಗುರುತಿಸಿ ನದಿಯ ನೀರು ದಿಕ್ಕು ಬದಲಿಸುವಂತೆ, ಕನ್ನಡ ಭಾಷೆ ಹೇಗೆ ದಿಕ್ಕು ಬದಲಿಸಿದೆ ತಿಳಿಯಬಹುದು” ಎಂದೆಲ್ಲ ವಿಮರ್ಶೆ ಬರೆಯಬಹುದು.
ಅಂತೆಯೇ, ಪದ್ಯಭಾಗದಲ್ಲಿ ಇತರೆ ಭಾಷೆಗಳಿಂದ ಬಂದ ಪದಗಳಿದ್ದರೆ ಗಮನಿಸಿ ಅದನ್ನು ಸಹ ಭಾವಾರ್ಥದಲ್ಲಿ ಸೇರಿಸಬಹುದು.
ಹೊಸಗನ್ನಡ ಕಥೆ, ಕವನ, ನಾಟಕ, ಕಾದಂಬರಿ, ಇತ್ಯಾದಿಗಳಲ್ಲಿ ಮಂಗಳೂರು, ಮೈಸೂರು, ಧಾರವಾಡ, ಗುಲ್ಬರ್ಗ ಕನ್ನಡಗಳ ,ಪದಗಳು ಭಾಷ ಸೊಗಡನ್ನು ಗುರುತಿಸಬೇಕು. ತತ್ಸಂಬಂಧ ಕಥೆ, ಕವನ, ನಾಟಕ, ಕಾದಂಬರಿ, ಇತ್ಯಾದಿಗಳ ಮೇಲಿನ ಪ್ರಶ್ನೆಗಳಿಗೆ ಉತ್ತರಿಸುವಾಗ ಅವನ್ನು ಸಮೊಯೋಚಿತವಾಗಿ ಉತ್ತರದಲ್ಲಿ ಸೇರಿಸಿ. (ನಿದರ್ಶನ – ಬೇಂದ್ರೆ ಅವರ ಕವನಗಳಲ್ಲಿನ ಧಾರವಾಡ ಕನ್ನಡ ಸೊಗಡು).
ಇಂಗ್ಲಿಷ್ ಭಾಷೆಯ ಪದಗಳ ಬಳಕೆಯನ್ನು ಗಮನಿಸಿ ಭಾಷೆ-ಭಾಷೆಗಳ ನಡುವಣ ಕೊಡು-ಕೊಳ್ಳು ಸಂಬಂಧ ಎಂತೆಲ್ಲ ಬರೆಯಬಹುದು. ನಿದರ್ಶನ – “ಕ್ಲಿಪ್ ಜಾಯಿಂಟ್ ಕಥೆಯಲ್ಲಿ ಶ್ರೀ ಅನಂತ ಮೂರ್ತಿ ಅವರು ಬಳಸುವ ಆಂಗ್ಲ ಪದಗಳಲ್ಲಿ ಭಾವನೆಗೆ ಭಾಷೆ ದಾಸನಾಗಬೇಕೆಂಬ ನಿಲುವು ನಿಚ್ಚಳವಾಗಿ ಕಂಡುಬರುತ್ತದೆ” ಎಂದು ಬರೆಯಬಹುದು.
೨. ಕನ್ನಡ ಸಾಹಿತ್ಯದ ಇತಿಹಾಸ
ಈ ಉಪವಿಭಾಗಕ್ಕೆ “ಶ್ರೀ ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ” ಪುಸ್ತಕ ಮಾಲಿಕೆಯ ೧೦ ಪುಸ್ತಕಗಳಲ್ಲಿನ ಆಯ್ದಭಾಗಗಳು ಅತ್ಯುಪಯುಕ್ತ. (ಎಚ್ಚರವಿರಲಿ – ಪೂರ್ತಿ ಅಲ್ಲ, ಸಿಲಬಸ್ ಗೆ ಸಂಬಂಧಪಟ್ಟ ಆಯ್ದ ಭಾಗಗಳು ಮಾತ್ರ. ಸಪ್ನ ಪುಸ್ತಕ ಮಳಿಗೆಯಲ್ಲಿ ಇವು ಲಭ್ಯ. ಅಷ್ಟೇ ಅಲ್ಲದೆ ಮೈಸೂರು ಬ್ಯಾಂಕ್ ವೃತ್ತ ದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ‘ಪ್ರಸಾರಾಂಗ’ ಪುಸ್ತಕ ಮಾರಾಟ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಲಭ್ಯ.
ಪ್ರತಿಯೊಬ್ಬ ಕವಿಯ ಬಗ್ಗೆಯೂ, ಆತನ ಕಾಲದ ಬಗ್ಗೆಯೂ, ಆತನ ಶೈಲಿಯ ಬಗ್ಗೆಯೂ ತಿಳಿದು ತುಲನಾತ್ಮಕ ವಿಮರ್ಶೆಗೆ ಬಳಸಬಹುದು. ಪ್ರತಿಯೊಬ್ಬ ಕವಿಯ ಬಗ್ಗೆ ಇತರ ವಿಮರ್ಶಕರ ಹೇಳಿಕೆಗಳು (ಉದಾಹರಣೆಗೆ, ಪಂಪನ ಬಗ್ಗೆ ತೀ. ನಂ. ಶ್ರೀ. ಅವರ ಹೇಳಿಕೆ ; ರತ್ನಾಕರವರ್ಣಿ ಕುರಿತ ಕುವೆಂಪು ಅವರ ಹೇಳಿಕೆ ಇತ್ಯಾದಿ) ತಮಗೆ ತಿಳಿದಿರಬೇಕು. ಅಂತೆಯೆ ಪ್ರತಿಯೊಬ್ಬ ಕವಿಯ ಇಂದಿನ ಪ್ರಸ್ತುತತೆ ಯನ್ನು ಉತ್ತರದಲ್ಲಿ ಸೇರಿಸಿ. ತಮ್ಮ ‘ಸಾಮಾನ್ಯ ಅಧ್ಯಯನ’ (ಜನರಲ್ ಸ್ಟಡೀಸ್) ನಿಂದ ತಿಳಿದುಕೊಂಡಿರುವ ವಿಚಾರಗಳ ಹಿನ್ನಲೆಯಲ್ಲಿ ಕವಿಯ ಪ್ರಸ್ತುತತೆಯನ್ನು ವಿಶ್ಲೆಸಿಬಹುದು. ಉದಾಹರಣೆಗೆ, ಇತ್ತೀಚೆಗೆ ಪ್ರಕಟಗೊಂಡ ವರದಿಯೊಂದರ ಪ್ರಕಾರ ಕೆಲ ಜಾತಿಗಳ ಕುಟುಂಬಗಳಿಗೆ ನಗರಗಳಲ್ಲಿ ಮನೆ ಬಾಡಿಗೆ ಕೊಡದಿರುವುದು ಬೆಳಕಿಗೆ ಬಂದಿದೆ. ಇದರ ಹಿನ್ನಲೆಯಲ್ಲಿ ಬಸವಣ್ಣನವರ ವಚನಗಳ ಪ್ರಸ್ತುತತೆಯನ್ನು ಅವಲೋಕಿಸಬಹುದು.
೩. ಹೊಸಗನ್ನಡ ಸಾಹಿತ್ಯ ಚರಿತ್ರೆ
ಪ್ರಸ್ತುತ ಉಪವಿಭಾಗಕ್ಕೆ ಶ್ರೀ ಎಲ್.ಎಸ್. ಶೇಷಗಿರಿ ರಾವ್ ವಿರಚಿತ “ಹೊಸಗನ್ನಡ ಸಾಹಿತ್ಯ ಚರಿತ್ರೆ” ಪುಸ್ತಕ ಅತ್ಯಂತ ಮಹತ್ವದ್ದು. ಅದರ ಜೊತೆಯಲ್ಲಿಯೇ ಮೈಸೂರು ವಿಶ್ವವಿದ್ಯಾಲಯದ ಎಂಎ (ಕನ್ನಡ) ಪುಸ್ತಕಗಳು ಅತ್ಯಂತ ಅನುಕೂಲ.
ಪ್ರತಿ ಸಾಹಿತ್ಯ ಚಳುವಳಿಯ ಗುಣಲಕ್ಷಣಗಳನ್ನು ಚೆನ್ನಾಗಿ ತಿಳಿದು ಅದಕ್ಕೆ ತಕ್ಕ ಉದಾಹರಣೆಗಳನ್ನು ಕಂಡುಕೊಳ್ಳಿ. ಶೇಷಗಿರಿ ರಾವ್ ಪುಸ್ತಕದಲ್ಲಿನ ಉದಾಹರಣೆಗಳನ್ನು ಮಾತ್ರವಲ್ಲದೆ ಪತ್ರಿಕೆ ೨ ರಲ್ಲಿನ ವಿಷಯಗಳಲ್ಲಿನ ಉದಾಹರಣೆಗಳನ್ನು ನೀಡಬೇಕು. ನಿದರ್ಶನ – ನವೋದಯದ ‘ಜೀವನ ಪ್ರೀತಿ’ ಮೌಲ್ಯಕ್ಕೆ ಉದಾಹರಣೆಯಾಗಿ ‘ಹೊಸಗನ್ನಡ ಕವಿತೆಯಲ್ಲಿನ’ ಮಾಸ್ತಿ ಅವರ ‘ಬಾಳು ಜಾರುಬಂಡೆಯಾಟ’ ಕವಿತೆ ಯನ್ನು ನೀಡಬಹುದು. ಆ ಪದ್ಯದ ಕಡೆಯ ಸಾಲು – ‘ಚಣ ಮುಗಿದು ಬುಡ ಸೇರುವೆವು, ಮತ್ತೆ ತುದಿಗೆರುವೆವು’ ಲ್ಲಿ ಜೀವನ ಪ್ರೀತಿ ಘನೀಕರಿಸಿದೆ. ಅಂತೆಯೇ ಮಾಸ್ತಿ ಅವರ ‘ಮೊಸರಿನ ಮಂಗಮ್ಮ’ ಕಥೆಯಲ್ಲಿ ಮಂಗಮ್ಮ ಹೊಸ ರವಿಕೆ ಹೊಲೆಸಿಕೊಲ್ಲುವುದ್ರಲ್ಲೂ “ಏಜ್ ಇಸ್ ಜಸ್ಟ್ ಅ ನಂಬರ್’ ಎಂಬ ಆಂಗ್ಲ ಉಕ್ತಿಯನ್ನು ನೆನಪಿಸುವುದರ ಜೊತೆ ಜೊತೆಗೆ ಜೀವನ ಪ್ರೀತಿಯ ದ್ಯೋತಕವೂ ಆಗಿದೆ.
ಪ್ರಗತಿಶೀಲ ಚಳುವಳಿಯ ಕುರಿತು ಬರೆಯುವಾಗ ‘ಕೊನೆಯ ಗಿರಾಕಿ’ ಕಥೆಯನ್ನು ಉದಾಹರಿಸಬಹುದು.
ಹೀಗೆ ಪತ್ರಿಕೆ ೨ ರಲ್ಲಿನ ಉದಾಹರಣೆಗಳನ್ನು ಶೇಷಗಿರಿ ರಾವ್ ವಿರಚಿತ “ಹೊಸಗನ್ನಡ ಸಾಹಿತ್ಯ ಚರಿತ್ರೆ” ಪುಸ್ತಕದಲ್ಲಿನ ಉದಾಹರಣೆಗಳನ್ನು ನೀಡಿ ಉತ್ತರದ ಗುಣಮಟ್ಟವನ್ನು ಹೆಚ್ಚಿಸಿ.
ಅಂತೆಯೇ ಪತ್ರಿಕೆ ೨ ರಲ್ಲಿ ಉತ್ತರ ಬರೆಯುವಾಗ ಈ ಸಾಹಿತ್ಯ ಚಳುವಳಿಗಳ ಸಾಹಿತ್ಯ ಲಕ್ಷಣಗಳು ಹೇಗೆ ಸಾಕಾರಗೊಂಡಿವೆ ಎಂದು ಬರೆಯುವುದು ಒಳ್ಳೆಯದು.
೪. ಕಾವ್ಯ ಮೀಮಾಂಸೆ
ಕಾವ್ಯ ಮೀಮಾಂಸೆ ಗೆ ವೆಂಕಟೇಶಪ್ಪ ಸರ್, ಜಿನೆಂದ್ರ ಸರ್ ನೋಟ್ಸ್, ಮೈಸೂರು ವಿಶ್ವವಿದ್ಯಾಲಯದ ಎಂಎ (ಕನ್ನಡ) ಪುಸ್ತಕಗಳು – ಇವನ್ನು ಪ್ರಮುಖವಾಗಿ ಓದಿದ್ದೆ. ಜೊತೆಯಲ್ಲಿ ಸ್ವಲ್ಪ ಮಟ್ಟಿಗೆ ತಿಪ್ಪೇರುದ್ರಸ್ವಾಮಿ ವಿರಚಿತ “ತೌಲನಿಕ ಕಾವ್ಯ ಮೀಮಾಂಸೆ’ ಹೊತ್ತಿಗೆಯನ್ನು ಓದಿದ್ದೆ. ಜೊತೆ ಜೊತೆಗೆ ಮೀಮಾಂಸೆಯ ಪರಿಕಲ್ಪನೆಗಳನ್ನು ವಿಮರ್ಶೆಯ ಪರಿಕಲ್ಪನೆಗಳೊಂದಿಗೆ ಹೋಲಿಸಬೇಕು. ಉದಾಹರಣೆಗೆ ಅರಿಸ್ಟಾಟಲ್ ನ ‘ಕಾಥರ್ಸಿಸ್’ ಪರಿಕಲ್ಪನೆಯನ್ನು ‘ಶಾಂತ ರಸ’ ದ ಜೊತೆ ಹೋಲಿಸುವುದು. (ಸಿ.ಎನ್. ರಾಮಚಂದ್ರನ್ ವಿರಚಿತ ಸಾಹಿತ್ಯ ವಿಮರ್ಶೆ ಪುಸ್ತಕದ ೨ನೆ ಅಧ್ಯಾಯದಲ್ಲಿ ಕೆಲವು ವಿಮರ್ಶೆ ಪರಿಕಲ್ಪನೆಗಳಿವೆ. ಅವನ್ನು ಕಾವ್ಯ ಮೀಮಾಂಸೆಯ ಪರಿಕಲ್ಪನೆಗಳೊಂದಿಗೆ ಹೋಲಿಕೆ ಮಾಡಿದ ಟಿಪ್ಪಣಿಗಳನ್ನು ನೀಡಲಾಗಿದೆ).
ಅಂತೆಯೇ, ರಾಷ್ಟ್ರ ಕವಿ ಶ್ರೀ ಶಿವರುದ್ರಪ್ಪ ವಿರಚಿತ ‘ಕಾವ್ಯಾರ್ಥ ಚಿಂತನ’ ಪುಸ್ತಕ ಕೂಡ ಅವಶ್ಯಕ. (ರೀತಿ ಪರಿಕಲ್ಪನೆಗೆ ಈ ಪುಸ್ತಕದ ಲೇಖನ ಅತ್ಯುಪಯುಕ್ತ. ಹಾಗೆಯೆ ‘ಪ್ರತಿಭೆ’, ‘ಸ್ಪೂರ್ತಿ’, ‘ಮಾನಸಿಕ ದೂರ ‘ ಇತ್ಯಾದಿ ಪರಿಕಲ್ಪನೆಗಳ ಬಗ್ಗೆಓದಿ. ಇದು ಸಿಲಬಸ್ ಅಲ್ಲಿ ಇಲ್ಲ. ಆದರೂ ಪ್ರಶ್ನೆ ಬರಬಹುದು. ಅಷ್ಟೇ ಅಲ್ಲ, ಆ ಪರಿಕಲ್ಪನೆಗಳನ್ನು ಪತ್ರಿಕೆ ೨ ರಲ್ಲಿ ಹೇರಳವಾಗಿ ವಿಮರ್ಶೆಗೆ ಬಳಸಬಹುದು. ನಿದರ್ಶನ – ಕೆಲವೊಂದು ಉತ್ತರದಲ್ಲಿ ಹೆಚ್ಚಿನ ವಿಮರ್ಶೆಗೆ ಅವಕಾಶ ಇಲ್ಲದಿರುವಾಗ ‘ಪ್ರಸ್ತುತ ಕಾವ್ಯ ಭಾಗವನ್ನು ಕವಿಯು ಸ್ಪೂರ್ತಿಯ ತೆಕ್ಕೆಗೆ ಸಿಲುಕಿದಾಗ ರಚಿಸಿರುವುದರಿಂದ ಸಹೃದಯನಲ್ಲಿ ಧನಾತ್ಮಕ ಭಾವನೆ ಮೂಡಿಸುತ್ತದೆ.’ ಹೀಗೆಲ್ಲ ಬರೆಯಬಹುದು.
ಕಾವ್ಯ ಮೀಮಾಂಸೆ ಯ ಪ್ರಶ್ನೆಗಳಿಗೆ ಉತ್ತರಿಸುವಾಗ ಸಂಸ್ಕೃತ ವಾಕ್ಯಗಳನ್ನು ಉಲ್ಲೆಕಿಸುವ ಪ್ರಯತ್ನ ಮಾಡಿ. ಪ್ರತಿ ಕಾವ್ಯ ಮೀಮಾಂಸೆಯ ಪರಿಕಲ್ಪನೆಗೆ ಹಳೆಗನ್ನಡ, ಹೊಸಗನ್ನಡ, ಜನಪದದ ಉದಾಹರಣೆ ನೀಡಿದರೆ ಒಳ್ಳೆಯದು. ಇದು ನಿಮ್ಮ ಉತ್ತರವನ್ನು ವಿಭಿನ್ನಗೊಳಿಸುತ್ತದೆ. ನಿದರ್ಶನ – ‘ರೀತಿ’ ಗೆ ನಿದರ್ಶನವಾಗಿ ಹಳೆಗನ್ನಡದಲ್ಲಿ ‘ಅಳಗಂ ಮಂದಾರ ಶೂನ್ಯಂ……’ ಎಂಬ ಆದಿಪುರಾಣದ ಕಾವ್ಯಭಾಗವನ್ನು, ಹೊಸಗನ್ನಡದಲ್ಲಿ ರಾಜರತ್ನಂ ಅವರ ಕುಡುಕನ ಭಾಷೆಯ ಶೈಲಿ, ಸಿದ್ದಲಿಂಗಯ್ಯ ಅವರ ‘ಇಕ್ರಲಾ ಓದಿರ್ಲಾ….’ ಸಾಲಿಂಥ ಹಳ್ಳಿಯ ಭಾಷೆಯನ್ನೂ ಮತ್ತು ಜನಪದದ ‘ರತ್ತೋ ರತ್ತ್ಹೋ ರಾಯನ ಮಗಳೇ…..’ ಸಾಲನ್ನು ಉದಾಹರಿಸಬಹುದು. ಶ್ರೀ ಗಿರಡ್ಡಿ ಗೋವಿಂದರಾಜು ಅವರ ‘ವಚನ ವಿನ್ಯಾಸ’ ಪುಸ್ತಕದಲ್ಲಿ ಪಾಶ್ಚಾತ್ಯ ಶೈಲಿಶಾಸ್ತ್ರದ ಹಲವು ಪರಿಕಲ್ಪನೆಗಳ ಚರ್ಚೆ ಇದೆ. ಅದನ್ನು ಓದಿ ರೀತಿಯೊಂದಿಗೆ ಹೋಲಿಸಿ ಬರೆಯಬಹುದು. ಈ ಪುಸ್ತಕ ಪತ್ರಿಕೆ ೨ ಲ್ಲಿನ ವಚನಗಳ ವಿಮರ್ಶೆಗೂ ಸಹ ಉಪಯುಕ್ತ.
ಕಡೆಯದಾಗಿ ಎಲ್ಲೆಲ್ಲಿ ಕಾವ್ಯ ಮೀಮಾಂಸೆಯ ಯುದೆ ಪ್ರಸ್ಥಾನಗಳು ಹೊಂದಿಕೆಯಾಗದಿರುವಾಗ ‘ಔಚಿತ್ಯ’ ಪರಿಕಲ್ಪನೆಯನ್ನು ಬಳಸಬಹುದು.
೫. ಸಾಹಿತ್ಯ ವಿಮರ್ಶೆ
ಇದೊಂದು ನಿಗೂಢ ಉಪವಿಭಾಗ ಎನ್ನಬಹುದು. ಕಾರಣ ಇಲ್ಲಿಂದ ಬರುವ ಹಲವು ಪ್ರಶ್ನೆಗಳಿಗೆ ಉತ್ತರ ಎಲ್ಲಿ ಸಿಗುತ್ತದೋ ಎಷ್ಟೋ ಬಾರಿ ತಿಳಿಯುವುದೇ ಇಲ್ಲ.
ಡಾ. ಸಿ.ಎನ್. ರಾಮಚಂದ್ರನ್ ವಿರಚಿತ ‘ಸಾಹಿತ್ಯ ವಿಮರ್ಶೆ’ ಪುಸ್ತಕ ವನ್ನು ಓದಿ. ಪ್ರತಿಯೊಬ್ಬ ವಿಮರ್ಶಕನ ಕೊಡುಗೆಯ ಕುರಿತು ೨ ಪುಟದಷ್ಟು ಟಿಪ್ಪಣಿ ತಯಾರು ಮಾಡಿಕೊಳ್ಳಿ. ವಿಮರ್ಶಕರ ಹೆಸರುಗಳು ಚೆನ್ನಾಗಿ ನೆನಪಿರಲಿ. ಅವನ್ನು ಪತ್ರಿಕೆ ಯೆಅರ್ದರಲ್ಲಿ ಬಳಸಬಹುದು. ಉದಾಹರಣೆಗೆ, ಅಕ್ಕಮಹಾದೇವಿಯ ಕುರಿತು ಬರೆಯುವಾಗ ಸಿಮೊನ್ ದ ಬೊವ ವಿಚಾರ ಲಹರಿಯನ್ನು ಹೋಲಿಕೆಗೆ ಬಳಸಬಹುದು.
ಇಲ್ಲಿ ಸ್ವಲ್ಪ ಉರು ಹೊಡೆಯುವುದು ಅನಿವಾರ್ಯ. ಆದರೆ ಅರ್ಥ ಮಾಡಿಕೊಂಡು ಉರು ಹೊಡೆಯಿರಿ. ಹಾ ಹಾ… ಹಾ…
೬. ಸಾಂಸ್ಕೃತಿಕ ಇತಿಹಾಸ
ಇಲ್ಲಿ ನೇರ ಪ್ರಶ್ನೆಗಳು ಬರುವುದರಿಂದ, ನಾನು ಹೆಚ್ಚಾಗಿ ಎನನ್ನು ಹೇಳಲಾರೆ. ಫಾಲಾಕ್ಷ ಅವರ ‘ಕರ್ನಾಟಕ ಇತಿಹಾಸ’ ಪುಸ್ತಕದ ಆಯ್ದ ಭಾಗಗಳನ್ನು ಓದಬಹುದು. ಈಗೀಗ ಸ್ವಲ್ಪ ಆಳಕ್ಕೆ ಇಳಿದು ಪ್ರಶ್ನೆ ಕೇಳುತ್ತಿರುವುದರಿಂದ ತಿಪ್ಪೇರುದ್ರಸ್ವಾಮಿ ವಿರಚಿತ ‘ಕರ್ನಾಟಕ ಸಾಂಸ್ಕೃತಿಕ ಸಮೀಕ್ಷೆ’ ಪುಸ್ತಕ ಅನುಕೂಲವಾಗಬಹುದು.
ಪತ್ರಿಕೆ ೨
ಪತ್ರಿಕೆ ೨ ರಲ್ಲಿ ಹೆಚ್ಚಿನ ಅಂಕ ಗಳಿಸಬೇಕಾದರೆ,
  • ಪತ್ರಿಕೆ ೧ ರಲ್ಲಿನ ಶಾಸ್ತ್ರಿಯ (ಭಾಷಾ ಶಾಸ್ತ್ರ, ಮೀಮಾಂಸೆ, ವಿಮರ್ಶೆ ಪರಿಕಲ್ಪನೆ) ಪರಿಕಲ್ಪನೆಗಳನ್ನು ಹೇರಳವಾಗಿ ಬಳಕೆ ಮಾಡಬೇಕು.
  • ಅಂತೆಯೆ ಉತ್ತರದಲ್ಲಿ ಸುಮ್ಮನೆ ಕಥೆ ಬರೆಯದೆ ಉತ್ತರದ ಶೇ ೫೦ ವಿಮರ್ಶೆಗೆ ಮೀಸಲಿರಬೇಕು.
  • ಎಷ್ಟು ಸಾಧ್ಯವೋ ಅಷ್ಟು ಹಳೆಗನ್ನಡ, ವಚನ, ಕೀರ್ತನೆ ಸಾಲು ಗಳನ್ನೂ ಉಲ್ಲೇಕಿಸಬೇಕು. ಪ್ರತಿ ಉತ್ತರದಲ್ಲೂ ‘ಪ್ರಸ್ತುತತೆ’ ಯನ್ನು ಬರೆಯಬೇಕು.
  • ಉತ್ತರದಲ್ಲಿ ನಿಮ್ಮ ಸ್ವಂತ ಅಭಿಪ್ರಾಯ ಅನಿಸಿಕೆಗಳನ್ನು ನೀಡಬೇಕು.
೧. ಪಂಪಭಾರತ
ಪಂಪಭಾರತದ ಹಳೆಗನ್ನಡ-ಹೊಸಗನ್ನಡ ಪುಸ್ತಕವೊಂದಿದೆ. ಅದರ ಪ್ರಸ್ತಾವನೆ ಅತ್ಯಂತ ಉಪಯುಕ್ತ. ನಂತರದಲ್ಲಿ ಇಡಿ ಪಂಪಭಾರಥವನ್ನು ಘಟನೆಗಳಾಗಿ ವಿಭಾಗಿಸಿ – – ದ್ರೋಣನ ಸಾವು, ಅಶ್ವತ್ಹಾಮ-ಕರ್ಣರ ಜಟಾಪಟಿ, ಕರ್ಣ-ಭೀಷ್ಮರ ಭೇಟಿ ಇತ್ಯಾದಿ – – ಪ್ರತಿ ಘಟನೆಯನ್ನು ನಿಮ್ಮದೇ ಆದ ವಾಕ್ಯಗಳಲ್ಲಿ ವಿಮರ್ಶಾತ್ಮಕವಾಗಿ, ಅಲ್ಲಲ್ಲಿ ಹಳಗನ್ನಡ ವಾಕ್ಯಗಳನ್ನು ಉಲ್ಲೇಖಿಸಿ ಬರೆಯುವ ಕೌಶಲ್ಯ ಬೆಳೆಸಿಕೊಳ್ಳಿ.
ಪಂಪಭಾರತವನ್ನು ಕುಮಾರವ್ಯಾಸ ಭಾರತ ದೊಂದಿಗೆ ಹೋಲಿಕೆ ಮಾಡಬೇಕು.
೨. ಕುಮಾರವ್ಯಾಸ ಭಾರತ
ಕುವೆಂಪು ಅವರು ಕುಮಾರವ್ಯಾಸ ಭಾರತ ಸಂಗ್ರಹಕ್ಕೆ ಬರೆದಿರುವ ‘ತೋರಣನಾಂದಿ’ ಮತ್ತು ಮೈಸೂರು ವಿಶ್ವವಿದ್ಯಾಲಯದ ಎಂಎ (ಕನ್ನಡ) ಪುಸ್ತಕ ಅನುಕೂಲವಾಗುತ್ತದೆ.
ಇಲ್ಲಿಯೂ ಕೂಡ ಘಟನೆಗಳನ್ನು ವಿಭಾಗಿಸಿ ಅಲ್ಲಿಯ ವಾಕ್ಯಗಳನ್ನು ಉತ್ತರದಲ್ಲಿ ಸೇರಿಸಿ ಕುಮಾರವ್ಯಾಸನ ಗ್ರಾಮ್ಯ ಶೈಲಿ,ರೂಪಕ ಬಳಕೆ ಇತ್ಯಾದಿಗಳನ್ನು ಅವನದೇ ವಾಕ್ಯಗಳನ್ನು ಅಲ್ಲಲ್ಲಿ ಬಳಿಸಿ ಉತ್ತರಿಸಿ. ಪೂರ್ತಿ ಸಾಲನ್ನು ಬರೆಯುವುದು ಸಾಧ್ಯವಿಲ್ಲ. ಆದ್ದರಿಂದ, ಕೆಲವೇ ಕೆಲವು ಹಳಗನ್ನಡ ಪದಗಳನ್ನು ಬಳಸಬಹುದು. ನಿದರ್ಶನ – ಕರ್ಣ ಹೇಳುತ್ತಾನೆ , ‘ಪಾರ್ಥನೆಮ್ಬುವನಾವ ಮಾನಿಸನು ….. ಬಲುಹು ಸಾರಥಿಯಿಂದ.. ರಿಪುಗಳ ಗೆಲುವು ಸಾರಥಿಯಿಂದ….” .; “ಅವನಿಪತಿಗಳ ಸೇವೆಯಿದು ಕಷ್ಟವಲೆ” ಇತ್ಯಾದಿ ಸಣ್ಣ ಸಣ್ಣ ಪದಪುಂಜ ಬಳಸಿ ನಿಮಗೆ ಪಠ್ಯ ತಿಲಿತಿಲಿದಿದೆ ಎಂದು ತೋರಿಸಿಕೊಳ್ಳಿ.
೩. ವಡ್ಡಾರಾಧನೆ
ಜೈನ ತತ್ವಗಳಾದ ಪಂಚಾಣವ್ರತ, ಆಸ್ರವ, ನಿರ್ಜರ, ಇತ್ಯಾದಿ ಪರಿಕಲ್ಪನೆಗಳನ್ನು ಉತ್ತರದಲ್ಲಿ ಬಳಸಿ.
ವಡ್ಡಾರಾಧನೆ ಕಥೆಗಳಿಗೆ ನಕಾಶೆ (chart) ಹಾಕಿ ಎಲ್ಲ ಉಪಕಥೆಗಳ ಸರಣಿ ಮತ್ತು ಪಾತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
ವಡ್ಡಾರಾಧನೆ ಕಥೆಗಳನ್ನು ಹೊಸಗನ್ನಡ ಕಥೆಗಳು ಮತ್ತು ಜನಪದದ ಕಥೆಗಳೊಂದಿಗೆ ಹೋಲಿಸಿ.
೪. ವಚನಗಳು
ಶ್ರೀ ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಮಾಲಿಕೆಯ ಚಿದಾನಂದ ಮೂರ್ತಿ ವಿರಚಿತ ‘ವಚನ ಸಾಹಿತ್ಯ’ ಕೃತಿ ಅನುಕೂಲವಾಯಿತು. ಗಿರಡ್ಡಿ ಗೋವಿಂದರಾಜು ಅವರ ‘ವಚನ ವಿನ್ಯಾಸ’ ಕೃತಿ ವಚನ ವಿಶ್ಲೇಷಣೆಗೆ ಹೊಸ ದಿಕ್ಕನ್ನೇ ತೋರಿಸಿತು. (ಅಷ್ಟೇ ಅಲ್ಲ ಈ ಕೃತಿ ಶೈಲಿಶಾಸ್ತ್ರದ ಹಲವು ಪರಿಕಲ್ಪನೆಗಳಾದ ‘ಪುನರಾವರ್ತನೆ’, ‘ಸಮಾoತರತೆ’, ‘ರಚನಸಾಮ್ಯ’ ಇತ್ಯಾದಿ ಪರಿಕಲ್ಪನೆಗಳು ಕೀರ್ತನೆ, ಹಳೆಗನ್ನಡ ಕಾವ್ಯ, ಹೊಸಗನ್ನಡ ಕಾವ್ಯಗಳ ವಿಶ್ಲೆಶನೆಗು ಸಹಾಯಕವಾಯಿತು.
ಕೇವಲ ಬಸವಣ್ಣ, ಅಕ್ಕಮಹಾದೇವಿ, ಜೇಡರ ದಸಿಮಯ್ಯ, ಅಲ್ಲಮ ಪ್ರಭು ವಚನಗಳ ಜೊತೆ ಜೊತೆಗೆ ಅಷ್ಟೊಂದು ಪ್ರಸಿದ್ಧಿಇರದ ವಚನಕಾರರ ವಚನಗಳ ಸಾಲುಗಳನ್ನು ನೆನಪಿನಲ್ಲಿಡಿ. ವಿಶೇಷವಾಗಿ ವಚನಕರ್ಥಿಯರ ವಚನಗಳ ಕುರಿತು ನಿಮಗೆ ತಿಳಿದಿರಬೇಕು. ನಾನು ಸರಿ ಸುಮಾರು ೧೦೦ ವಚನಗಳ ಸಾಲುಗಳನ್ನು ತಿಳಿದಿದ್ದೆ. ವಚನದ ಮೇಲಿನ ಉತ್ತರದಲ್ಲಿ ಕಡ್ಡಾಯವಾಗಿ ಪ್ರಸಿದ್ಧರಲ್ಲದವರ ವಚನಗಳ ಜೊತೆಗೆ ಇತರೆ ವಚನಕಾರರ ವಚನಗಳ ಸಾಲುಗಳನ್ನು ಮತ್ತು ವಚನಕಾರ್ಥಿಯರ ವಚನ ಸಾಲುಗಳನ್ನು ಉಲ್ಲೇಖಿಸುತ್ತಿದ್ದೆ.
ವಚನಗಳನ್ನು ಕೀರ್ತನೆಗಳೊಂದಿಗೆ ಹೋಲಿಸುತ್ತಿದ್ದೆ. ಮತ್ತು ಕೀರ್ತನೆಗಳನ್ನು ವಚನಗಳೊಂದಿಗೆ ಹೋಲಿಸುತ್ತಿದ್ದೆ.
೫. ಕೀರ್ತನೆಗಳು
ಶ್ರೀ ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಮಾಲಿಕೆಯ ಚಿದಾನಂದ ಮೂರ್ತಿ ವಿರಚಿತ ‘ಕೀರ್ತನೆಕಾರರು’ ಕೃತಿ ಅನುಕೂಲವಾಯಿತು ಕೀರ್ತನೆಗಳ ಸಾಲುಗಳನ್ನು ನೆನಪಿನ್ನಲ್ಲಿಡಿ. ಅಂತೆಯೆ ಕೀರ್ತನೆಗಳನ್ನು ವಚನಗಳೊಂದಿಗೆ ಹೋಲಿಸಿ. ಮೇಲೆ ಹೇಳಿದ ಶೈಲಿಶಾಸ್ತ್ರದ ಪರಿಕಲ್ಪನೆಗಳನ್ನು ಇಲ್ಲಿಯೂ ಉಪಯೋಗಿಸಬಹುದು.
೬. ಭರತೇಶ ವೈಭವ
  • ಭರತೇಶ ವೈಭವಕ್ಕೆ ಕುವೆಂಪು ಅವರು ಬರೆದಿರುವ ಸುಮಾರು ೬೦ ಪುಟಗಳ ಪ್ರಸ್ತಾವನೆ ಮತ್ತು ಮೈಸೂರು ವಿಶ್ವವಿದ್ಯಾಲಯದ ಎಂಎ (ಕನ್ನಡ) ಪುಸ್ತಕ ಅನುಕೂಲ.
  • ಅಂತೆಯೇ ಶಿವರುದ್ರಪ್ಪ ಅವರ ‘ಯೋಗ-ಭೋಗ ತೊಡಕು’ ವಿಮರ್ಶಾ ಲೇಖನ ಮತ್ತು
  • ಅದಕ್ಕೆ ವಿರುದ್ದವಾಗಿ ಜಯಚಂದ್ರ ಅವರು ಬರೆದಿರುವ ‘ರತ್ನಾಕರನಲ್ಲಿ ಯೋಗ-ಬೋಗದ ತ್ಹೊದಕಿದೆಯೇ?’ ವಿಮರ್ಶೆ ಅನುಕೂಲವಾಗುತ್ತವೆ.
  • ಚಂದ್ರಶೇಕರ ಕಂಬಾರರ ದೇಶಿಯ ಚಿಂತನೆ ಪುಸ್ತಕದಲ್ಲಿನ ಲೇಖನ,
  • ಡಾ. ಕುಮುದಾ ವಿರಚಿತ ‘ಚಿಂತನ’ ಪುಸ್ತಕದಿಂದ ಆಯ್ದ “ಭರತೇಶ ವೈಭವದ ಭರತ-ಬಾಹುಬಲಿ ಪ್ರಸಂಗ” ಲೇಖನ;
  • ಡಾ. ಡಿ. ಲಿಂಗಯ್ಯ ವಿರಚಿತ ‘ಕಾವ್ಯಪರುಷ’ ಸಂಕಲನದ ‘ರತ್ನಾಕರನ ಶೈಲಿ’ ಲೇಖನ.
ಮೇಲಿನ ಪುಸ್ತಕಗಳು ಬೆಂಗಳೂರು ವಿಜಯನಗರದ ಆರ್.ಪಿ.ಸಿ. ಬಡಾವಣೆಯ ಗ್ರಂಥಾಲಯದಲ್ಲಿ ಲಭ್ಯವಿವೆ.
(ವಿರಾಮ – ನನ್ನ ಒಂದು ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಮನಸ್ಸಾಗುತ್ತಿದೆ. ಪ್ರಥಮ ಪ್ರಯತ್ನದಲ್ಲಿ ಸಂದರ್ಶನಕ್ಕೆ ಕರೆ ಬಾರದಿದ್ದಾಗ ಕನ್ನಡ ಸಾಹಿತ್ಯದಲ್ಲೇ ಕಡಿಮೆ ಅಂಕ ಬಂದಿರಬಹುದೆಂದು ಭಾವಿಸಿ ಕನ್ನಡ ಸಾಹಿತ್ಯದಲ್ಲಿ ಮುಂದಿನ ಬಾರಿ ಅತಿ ಹೆಚ್ಚು ಅಂಕಗಳನ್ನು ಪಡೆಯಲೇಬೇಕೆಂಬ ಧೃಡಚಿತ್ತದಿಂದ ಮೇಲೆ ಹೇಳಿದ ಗ್ರಂಥಳಯದಲ್ಲಿನ ‘ಎಲ್ಲ’ ವಿಮರ್ಶೆ ಪುಸ್ತಕಗಳ ಪರಿವಿಡಿಯನ್ನು ಅವಲೋಕಿಸಿ, ಸಿಲಬುಸ್ ಗೆ ಸಂಬಂದಿಸಿದ ಲೇಖನಗಳಿವೆಯೇ ಎಂದು ಪರಿಶೀಲಿಸಿ, ಅಂತಹ ಲೇಖನ ಇದ್ದಲ್ಲಿ ಅದರ ಸಾರಾಂಶವನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆ. ನಂತರ ಅಂಕಗಳು ಬಿಡುಗಡೆಯಾದ ಮೇಲೆ ನನ್ನ ಎಣಿಕೆ ತಪ್ಪಾಗಿತ್ತು. ಕನ್ನಡದಲ್ಲಿ ನಾನು ಸರಾಸರಿಗಿಂತ ಹೆಚ್ಚಿನ ಅಂಕ ಪಡೆದಿದ್ದೆ. ಒಂದು ರೀತಿಯಲ್ಲಿ ನಾನು ಕಡಿಮೆ ಅಂಕ ಪಡೆದಿರಬಹುದು ಎಂಬ ತಪ್ಪು ಎಣಿಕೆ ನನಗೆ ವರವಾಯ್ತು. ನನ್ನ ಪರಿಶ್ರಮಕ್ಕೆ ಕೊನೆಗೂ ಪ್ರತಿಫಲ ದಕ್ಕಿದೆ. ಮೆಹನತ್ಕಾಫಲ್ ಹಮೇಶ ಮೀಠಹಿಹೋತಾ ಹೈ ಎನ್ನುವ ಹಿಂದಿಯ ಉಕ್ತಿ ಖಂಡಿತಾ ಸತ್ಯ.)
ಉರಿಲಿಂಗದೇವ, ಗಜೇಶ ಮಸಣಯ್ಯರ ವಚನಗಳಲ್ಲಿ ಕಾಮದ ಸಂಕೇತಗಳನ್ನೇ ಬಳಸಿಕೊಂಡು ಭಕ್ತಿಯನ್ನು ವ್ಯಕ್ತಪಡಿಸುತ್ತಾರೆ. ಆ ವಚನಗಳನ್ನು ‘ಯೋಗ-ಭೋಗ ಸಮನ್ವಯ’ಕ್ಕೆ ಹೋಲಿಸಬಹುದು. ನಂಬಿಯಣ್ಣನ ರಗಳೆಯನ್ನು ಸಹ ಇದಕ್ಕೆ ಹೋಲಿಕೆ ಮಾಡಬಹುದು.
೭. ನಂಬಿಯಣ್ಣನ ರಗಳೆ
  • ಮೈಸೂರು ವಿಶ್ವವಿದ್ಯಾಲಯದ ಎಂಎ (ಕನ್ನಡ) ಪುಸ್ತಕ ಅನುಕೂಲ.
  • ವಸಿಷ್ಠ ಅವರ ನಂಬಿಯಣ್ಣನ ರಗಳೆಯ ಹೊಸಗನ್ನಡ ರೂಪ ಕಥೆಯ ಸ್ವರೂಪವನ್ನು ತಿಳಿಸುವುದು ಮಾತ್ರವಲ್ಲದೆ ನಿಮಗೆ ಅತ್ಯವಶ್ಯಕವಾದ ರಗಳೆಯಲ್ಲಿನ ಸಾಲುಗಳನ್ನು ಹೆಕ್ಕಿ ತೆಗೆಯಲು ಸಹಕಾರಿ.
  • ಡಾ. ಎಸ್.ವಿದ್ಯಾಶಂಕರ ಅವರ “ನಂಬಿಯಣ್ಣ: ಒಂದು ಅಧ್ಯಯನ” ಪುಸ್ತಕ ಸಹಾಯವಾಯಿತು (ಈ ಪುಸ್ತಕವು ಸಹ ಮೇಲೆ ಹೇಳಿದ ಗ್ರಂಥಾಲಯದಲ್ಲೇ ಸಿಕ್ಕಿದ್ದು.) – ಈ ಪುಸ್ತಕದಲ್ಲಿ ನಂಬಿಯಣ್ಣನರಗಳೆಗೆ ನೀಡಬಹುದಾದ ಹೋಲಿಕೆಗಳು ಲಭ್ಯವಾದವು. ಅಷ್ಟೇ ಅಲ್ಲದೆ ಮೂಲ ಕೃತಿಯಿಂದ ಹರಿಹರ ಮಾಡಿಕೊಂಡಿರುವ ಮಾರ್ಪಾಡುಗಳ ಮಾಹಿತಿ ಲಭ್ಯವಾಯಿತು.
ಈ ರಗಳೆಯನ್ನು ಭರತೇಶ ವೈಭವದೊಡನೆ ಹೋಲಿಸಬಹುದು.
೮. ಹೊಸಗನ್ನಡ ಕವಿತೆ
ಎಲ್ಲಾಕವಿತೆಗಳನ್ನು ಓದಿ ಅರ್ಥೈಸಿಕೊಳ್ಳುವುದು ಕಷ್ಟಸಾದ್ಯ. ಹಾಗಾಗಿ ತುಂಬಾ ಪ್ರಮುಖ ಕವಿಗಳ ಕವಿತೆಗಳ ಸಾರಾಂಶ ಬರೆದು ತಯಾರಾಗಿ. ಅಕ್ಕ ಐಎಎಸ್ ಅವರ ನೋಟ್ಸ್ ಅಲ್ಲಿ ಹಲವು ಕವಿತೆಗಳ ಸಾರಾಂಶ ಲಭ್ಯವಿದೆ. ಯಾರಾದರು ಕನ್ನಡ ಭೋದಕರು ಅಥವಾ ಸ್ನಾತಕ ವಿಧ್ಯಾರ್ಥಿಗಳ ಸಹಾಯ ಪಡೆದು ಅತಿ ಮುಖ್ಯ ಕವಿತೆಗಳ ಸಾರಾಂಶ ಮತ್ತು ಆ ಕವಿತೆಯಲ್ಲಿ ಸಾಕಾರಗೊಂಡಿರುವ ಚಳುವಳಿಯ ಲಕ್ಷಣಗಳನ್ನು ಟಿಪ್ಪಣಿ ರೂಪದಲ್ಲಿ ಮಾಡಿಟ್ಟುಕೊಳ್ಳಿ.
೯. ಬೆಟ್ಟದ ಜೀವ
ಹೆಚ್ಚಾಗಿ ಹೇಳುವುದು ಏನು ಇಲ್ಲ. ಆದರೆ ಶೇಷಗಿರಿರಾಯರ ‘ಹೊಸಗನ್ನಡ ಸಾಹಿತ್ಯ ಚರಿತ್ರೆ’ ಕೃತಿಯಲ್ಲಿನ ಕಾರಂತರ ಕಾದಂಬರಿ ಕುರಿತ ವಿಚಾರವನ್ನು ವಿಮರ್ಶೆಗೆ ಬಳಸಿ. ವೆಂಕಟೇಶಪ್ಪ ಸರ್ ಕೊಟ್ಟ ಟಿಪ್ಪಣಿಗಳು ಬಲು ಉಪಯುಕ್ತ. ದಯವಿಟ್ಟು ಕಾದಂಬರಿಯನ್ನು ಓದಿ, ಅದರ ಭಾಷೆ, ಶೈಲಿ ಇತ್ಯಾದಿಗಳ ಬಗ್ಗೆ ಟಿಪ್ಪಣಿ ಮಾಡಿಕೊಳ್ಳಿ.
೧೦. ಮಾಧವಿ
ಪಾತ್ರಗಳ ನಾಮಧೆಯಗಳನ್ನು ನೆನಪಿನಲ್ಲಿಡಿ. ವೆಂಕಟೇಶಪ್ಪ ಸರ್ ಟಿಪ್ಪಣಿಗಳು ಉಪಯುಕ್ತ. ಈ ಕಾದಂಬರಿಯನ್ನು ಸ್ತ್ರೀ ಕೇಂದ್ರಿತ ವಚನ, ಸ್ತ್ರೀವಾದಿ ವಿಮರ್ಶಕರಾದ ಸಿಮೊನ್ ದ ಬೊವ ಮತ್ತು ಇತರರ ವಿಚಾರಧಾರೆಗಳನ್ನೂ ಹೋಲಿಕೆಗೆ ಬಳಸಿ. ಪ್ರಸ್ತುತತೆಯನ್ನು ಬರೆಯುವಾಗ ಸ್ತ್ರೀ ಮೇಲೆ ಇಂದಿಗೂ ಜರಗುತ್ತಿರುವ ಅತ್ಯಾಚಾರ, ಶೋಷಣೆಯ ಬೆಳಕಿನಲ್ಲಿ ‘ದೆಹಲಿಯ ಸಾಮೂಹಿಕ ಅತ್ಯಾಚಾರವನ್ನು ಸಹ ಉದ್ಧರಿಸಬಹುದು.
೧೧. ಒಡಲಾಳ
  • ಶ್ರೀ ಎಚ್. ಕೆ. ವೆಂಕಟೇಶ್ ವಿರಚಿತ “ನೋವು ನಲಿವಿನ ಹಾಡು” ಪುಸ್ತಿಕೆಯಿಂದ ಆಯ್ದ “ಯಾರ ಜಪ್ತಿಗೂ ಸಿಗದ ನವುಲುಗಳು” ಲೇಖನ ಉಪಯುಕ್ತ. (ಮೇಲೆ ಹೇಳಿದ ಗ್ರಂಥಾಲಯದಲ್ಲಿ ಲಭ್ಯ)
ವಚನಗಳನ್ನು, ದಲಿತ ಸಾಹಿತ್ಯದ ಕವನಗಳನ್ನು, ಶೂದ್ರ ತಪಸ್ವಿಯನ್ನು, ಮಾರ್ಕ್ಸವಾದಿ ವಿಮರ್ಶಕರ ಅಭಿಪ್ರಾಯಗಳು ಉತ್ತರದ ಗುಣಮಟ್ಟ ಹೆಚ್ಚಿಸಲು ಸಹಕಾರಿ.
೧೨. ತುಘಲಕ್
  • ಮೈಸೂರು ವಿಶ್ವವಿದ್ಯಾಲಯದ ಎಂಎ (ಕನ್ನಡ) ಪುಸ್ತಕ ಅನುಕೂಲ.
  • ಶ್ರೀ ಕೃಷ್ಣಮೂರ್ತಿ ಚೆಂದುರ್ ಸಂಪಾದಿಸಿರುವ “ಗಿರೀಶ್ ಕಾರ್ನಾಡರ ನಾಟಕಗಳು” ವಿಮರ್ಶಾ ಸಂಕಲನದಲ್ಲಿ ಈ ನಾಟಕಕ್ಕೆ ಸಂಬಂದಿಸಿದ ಪರೀಕ್ಷೆಯಲ್ಲಿ ಉತ್ತರಿಸಲು ಸಹಕಾರಿಯಾದ ವಿಮರ್ಶೆಗಳು ಲಭ್ಯವಿವೆ.
ಹಲವು ವಿಮರ್ಶೆಗಳು ತುಘಲಕ್ ನ್ನು ನೆಹರು ಗೆ ಹೋಲಿಸಲಾಗಿದೆ. ದಯವಿಟ್ಟು ಉತ್ತರದಲ್ಲಿ ಅದನ್ನು ಬರೆಯಬೇಡಿ. ವಾಸ್ತವತೆಯ ಗಂಧವಿಲ್ಲದ ಮಹತ್ವಾಕಾಂಕ್ಷೆಯ ನಾಯಕರುಗಳ ಲೇವಡಿ ಅಥವಾ ಟೀಕೆ ಎಂದಷ್ಟೆ ನಮೂದಿಸಿ. ಸಾಧ್ಯವಾದಲ್ಲಿ ತುಘಲಕ್ ಪಾತ್ರವನ್ನು ಮನೋವೈಜ್ಞಾನಿಕ ದೃಷ್ಟಿಯಿಂದಲೂ ವಿವೇಚಿಸಿ (ಆಪ್ತ ಮಿತ್ರ ನಾಗವಲ್ಲಿ ಯನ್ನು ನೆನಪಿಸಿಕೊಳ್ಳಿ… ಹಾ ಹಾ ಹಾ…)
೧೩. ಶೂದ್ರ ತಪಸ್ವಿ
ವೆಂಕಟೇಶಪ್ಪ ಸರ್ ನೀಡಿದ ಟಿಪ್ಪಣಿಗಳು ಅದ್ಭುತ. ಸಾಧ್ಯವಾದಷ್ಟು ಕುವೆಂಪು ಬಳಸಿರುವ ನಡುಗನ್ನಡದ ಸಂಬಾಷಣೆಯನ್ನು ಉತ್ತರದಲ್ಲಿ ಬಳಸಿ. ದಲಿತ ಸಾಹಿತ್ಯ, ವಚನ ಸಾಹಿತ್ಯ, ಮಾರ್ಕ್ಸ್ವಾದಿ ವಿಮರ್ಶೆಯನ್ನ ಹೋಲಿಕೆಗೆ ಬಳಸಿ.
೧೪. ದೇವರು
ಪುಸ್ತಕವನ್ನು ಓದಿ ಮೂರ್ತಿರಾಯರ ವಿಚಾರಧಾರೆಯನ್ನು ಅರಿತುಕೊಳ್ಳಿ. ಪುಸ್ತಕದಲ್ಲಿ ಅವರು ನೀಡಿರುವ ಉದಾಹರಣೆಗಳನ್ನು ಒಂದೆಡೆ ಪಟ್ಟಿ ಮಾಡಿ. ನಂತರ ಪ್ರಶ್ನೆಯನ್ನು ನಿಮ್ಮದೇ ವಾಕ್ಯದಲ್ಲಿ ಸ್ವಂತವಾಗಿ ಉತ್ತರಿಸಿ.
೧೫. ಕನ್ನಡ ಸಣ್ಣ ಕಥೆಗಳು
ಎಲ್ಲ ಕಥೆಗಳನ್ನು ಓದಿ ನೀವೇ ಒಂದು ಸ್ವಂತ ನೋಟ್ಸ್ ಮಾಡುವುದು ಒಳ್ಳೆಯದು. ಪ್ರತಿ ಕಥೆಯನ್ನು ಕೆಳಗಿನ ಅಂಶಗಳ ಹಿನ್ನಲೆಯಲ್ಲಿ ವಿಶ್ಲೇಷಿಸಿ.
  • ಕಥೆಯ ಸಾರಾಂಶ
  • ಸಾಕಾರಗೊಂಡಿರುವ ಚಳುವಳಿಯ ಲಕ್ಷಣಗಳು
  • ಭಾಷೆಯ ಸ್ವರೂಪ
  • ಶೈಲಿ
  • ಕಾವ್ಯ ಮೀಮಾಂಸೆ ಅಂಶಗಳು
  • ಜನಪದ ಕಥೆಗಳೊಂದಿಗೆ ಹೋಲಿಕೆ
  • ವಡ್ಡಾರಾಧನೆ ಕಥೆಗಳೊಂದಿಗೆ ಹೋಲಿಕೆ
  • ಪಾತ್ರಸೃಷ್ಟಿ
  • ಪ್ರಸ್ತುತತೆ
ಒಬ್ಬರಿಗೆ ಎಲ್ಲಾ ಕಥೆಗಳ ಮೇಲೆ ನೋಟ್ಸ್ ಮಾಡಲು ಸಾಧ್ಯವಾಗದಿದ್ದರೆ, ಇತರೆ ಆಕಾಂಕ್ಷಿಗಳೋಡನೆ ಸೇರಿ ಪ್ರತಿಯೊಬ್ಬರು ಕೆಲವು ಕಥೆಗಳ ನೋಟ್ಸ್ ಮಾಡಿ ಹಂಚಿಕೊಳ್ಳಿ.
೧೫. ಜಾನಪದ ಸಾಹಿತ್ಯ
ಶ್ರೀ ಜಿನೇಂದ್ರ ಸರ್ ಅವರು ನೀಡಿದ ನೋಟ್ಸ್ ಬಹಳ ಅನುಕೂಲವಾಯಿತು. ಸಿಲಬಸ್ ನಲ್ಲಿರುವ ಪುಸ್ತಕ ದಲ್ಲಿನ ಪ್ರಸ್ತಾವನೆಯನ್ನು ಓದಿ ಟಿಪ್ಪಣಿ ಮಾಡಿಕೊಳ್ಳುವುದು ಒಳ್ಳೆಯದು. ಉದಾಹರಣೆಗೆ ನೀಡಲು ವಿವಿಧ ರೀತಿಯ ಗೀತೆಗಳು, ಗಾದೆಗಳು, ಒಗಟುಗಳು, ಕಥೆಗಳನ್ನು ಓದಿ ತಿಳಿದುಕೊಳ್ಳುವುದು ಒಳ್ಳೆಯದು.ಜನಪದವನ್ನು ಕಡೆಗಣಿಸಬೇಡಿ.
ವಿಮರ್ಶಾತ್ಮಕ ಉತ್ತರ
  • ತುಲನಾತ್ಮಕವಾಗಿರಬೇಕು
  • ಕಾವ್ಯ ಮೀಮಾಂಸೆಯ ಅಂಶಗಳನ್ನು ಗುರುತಿಸುವುದು
  • ವಿಮರ್ಶೆಯ ಪರಿಕಲ್ಪನೆಗಳನ್ನು ಗುರುತಿಸುವುದು
  • ನಿಮ್ಮ ಅಭಿಪ್ರಾಯ – ಅನಿಸಿಕೆ ನಮೂದಿಸಬೇಕು
  • ಪ್ರಸ್ತುತೆಯನ್ನು ಬರೆಯಬೇಕು (GS ವಿಷಯಗಳನ್ನು ಲಿಂಕ್ ಮಾಡಿ)
ಕನ್ನಡ ಸಾಹಿತ್ಯದ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ವಿಷಯಗಳನ್ನು ಹಂಚಿಕೊಂಡಿದ್ದೇನೆ. ಎಲ್ಲವನ್ನು ಹೇಳಲು ಸಾದ್ಯವಿಲ್ಲ ಅನಿಸುತ್ತಿದೆ. ಕಾಮೆಂಟ್ ಗಳಲ್ಲಿ ನಿಮ್ಮ ಸಂದೇಹವನ್ನು ಪರಿಹರಿಸುವೆ.
ಕರ್ನಾಟಕದಿಂದ ಹೆಚ್ಚು ಹೆಚ್ಚು ಅಭ್ಯರ್ಥಿಗಳು ನಾಗರೀಕ ಸೇವೆಗಳಿಗೆ ತೆರಳಲಿ ಎಂಬುದೇ ನನ್ನ ಆಶಯ.
ಕನ್ನಡಾಂಬೆಗೆ ಜೈ!!!!!!

Noteee lekhanavannu kannaDadalle baredu kodabekendu kelidaaga, khushiyaagi taDamaaDade baredukotta Balajiyavarige namma dhanyavaadagalu. Ee lekhanavannu kanndadalli Namma (Nimma) website nalli prakatisuttiruvudu namage atyanta hemmeya sangatiyaagide